ದೇಶಮುಖ್, ಚಿಂತಾಮಣ್ ದ್ವಾರಕಾನಾಥ್
1896 ಭಾರತದ ಆಡಳಿತ ಧುರೀಣ, ಬ್ಯಾಂಕಿನ ತಜ್ಞ, ಭಾರತ ಸರ್ಕಾರದ ಮಾಜಿ ಮಂತ್ರಿ.  ಮಹಾರಾಷ್ಟ್ರದ ಕೊಲಾಬ ಜಿಲ್ಲೆಯ ಮಹಾದ್ ತಾಲ್ಲೂಕಿನ ನಾತ ಎಂಬ ಹಳ್ಳಿಯಲ್ಲಿ 1896 ರ ಜನವರಿ 14 ರಂದು ಜನಿಸಿದರು.  ದ್ವಾರಕಾನಾಥ್ ಗಣೇಶ್ ದೇಶಮುಖ್ ಮತ್ತು ಭಾಗೀರಥಿ ಇವರ ಮೊದಲನೆಯ ಮಗ.  ಹುಟ್ಟಿದ ಊರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಮುಂಬಯಿಯಲ್ಲಿ ಪ್ರೌಢಶಿಕ್ಷಣವನ್ನೂ ಗಳಿಸಿದರು.  ಚಿಕ್ಕಂದಿನಿಂದಲೇ ಇವರಿಗೆ ಸಂಸ್ಕøತ ವ್ಯಾಸಂಗದಲ್ಲೂ ಆಸಕ್ತಿ ಬೆಳೆಯಿತು.  ಪ್ರೌಢಶಾಲೆಯಲ್ಲಿದ್ದಾಗ ಮರಾಠಿಯಲ್ಲೂ ಸಂಸ್ಕøತದಲ್ಲೂ ಕಾವ್ಯ ರಚಿಸತೊಡಗಿದರು.  15 ವರ್ಷ ತುಂಬುವುದಕ್ಕಿಂತ ಮುಂಚೆಯೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು.  ಸಂಸ್ಕøತ ಭಾಷೆಯಲ್ಲಿ ಅತ್ಯಂತ ಹೆಚ್ಚಿನ ಅಂಕಗಳನ್ನು ಪಡೆದು ಅದರಲ್ಲಿ ವಿದ್ಯಾರ್ಥಿ ವೇತನ ದೊರಕಿಸಿಕೊಂಡರು. ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಓದಿ ಬಿ.ಎ.ಯಲ್ಲೂ ಪ್ರಥಮ ಸ್ಥಾನ ಗಳಿಸಿದರು.  ದೇಶಮುಖರ ಪ್ರತಿಭೆಯನ್ನು ಗಮನಿಸಿದ ಸ್ನೇಹಿತರೂ ಪ್ರಾಧ್ಯಾಪಕರೂ ಅವರು ಸಿವಿಲ್ ಸರ್ವಿಸ್ ಪರೀಕ್ಷೆಗೆ ಅಭ್ಯಾಸ ಮಾಡಲು ಪ್ರೋತ್ಸಾಹಿಸಿದರು.  ಅವರು 1915 ರ ಮೇ ತಿಂಗಳಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿ ಕೇಂಬ್ರಿಜಿನ ಜೀಸಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.  ಐ.ಸಿ.ಎಸ್. ಪರೀಕ್ಷೆಗೆ ಕೂರುವುದರ ಜೊತೆಗೆ ಕಾನೂನು ಶಾಸ್ತ್ರವನ್ನೂ ಅಭ್ಯಾಸ ಮಾಡಿದರು.  1920 ರಲ್ಲಿ ಅವರು ರೋಸಿಯಾ ಸಿಲ್ಕಾಕ್ಸರನ್ನು ವಿವಾಹವಾದರು.  ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಭಾರತಕ್ಕೆ ಮರಳಿದ ಮೇಲೆ ಮಧ್ಯ ಪ್ರಾಂತ್ಯ ಮತ್ತು ಬೀರಾರ್‍ನ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕವಾದರು.  ಸರ್ಕಾರದ ಕೆಳ ಕಾರ್ಯದರ್ಶಿ ಡೆಪ್ಯುಟಿ ಕಮಿಷನರ್ ಮತ್ತು ಸೆಟ್ಲ್‍ಮೆಂಟ್ ಅಧಿಕಾರಿಯಾಗಿ ಕೆಲಸಮಾಡಿದ ಮೇಲೆ 1931 ರಲ್ಲಿ ಲಂಡನಿನಲ್ಲಿ ನಡೆದ ಎರಡನೆಯ ದುಂಡುಮೇಜಿನ ಪರಿಷತ್ತಿನ ಕಾರ್ಯದರ್ಶಿಯಾಗಿದ್ದರು. 1932 ರಿಂದ 1939 ರ ವರೆಗೆ ಮಧ್ಯಪ್ರಾಂತ್ಯ ಮತ್ತು ಬೀರಾರಿನ ರೆವಿನ್ಯೂ ಮತ್ತು ಹಣಕಾಸು ಕಾರ್ಯದರ್ಶಿಯಾಗಿದ್ದು 1939 ರಲ್ಲಿ ಕೇಂದ್ರ ಸರ್ಕಾರಕ್ಕೆ ವರ್ಗವಾಗಿ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ, ಆರೋಗ್ಯ ಮತ್ತು ಜಮೀನು ಅಧಿಕಾರಿ ಮುಂತಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದರು.  ಭಾರತದ ರಿಸರ್ವ್ ಬ್ಯಾಂಕನ್ನು ಅವರು ಪ್ರವೇಶಿಸಿದ್ದು ಅದೇ ವರ್ಷ. 1939 ರಿಂದ 1941 ರ ವರೆಗೆ ರಿಸರ್ವ್ ಬ್ಯಾಂಕಿನ ಕೇಂದ್ರೀಯ ಬೋರ್ಡಿನ ಕಾರ್ಯದರ್ಶಿಯಾಗಿದ್ದು ಅನಂತರ ಬ್ಯಾಂಕಿನ ಡೆಪ್ಯುಟಿ ಗವರ್ನರರೂ 1943 ರಿಂದ 1949 ರ ವರೆಗೆ ಅದರ ಗವರ್ನರರೂ ಆಗಿದ್ದರು. 

ದೇಶಮುಖ್ ರಿಸರ್ವ್ ಬ್ಯಾಂಕನ್ನು ಪ್ರವೇಶಿಸಿದಾಗ ಎರಡನೆಯ ಮಹಾಯುದ್ಧ ಪ್ರಾರಂಭವಾಗಿತ್ತು.  ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ದೇಶಮುಖರಿಗೆ ಆಗ ಹೆಚ್ಚಿನ ಪರಿಶ್ರಮ ಇರಲಿಲ್ಲವಾದರೂ ಕೆಲವೇ ತಿಂಗಳುಗಳಲ್ಲಿ ಬ್ಯಾಂಕಿಂಗ್ ವಿಷಯವನ್ನು ಅಭ್ಯಸಿಸಿ ಅದರಲ್ಲಿ ತಜ್ಞರೆನಿಸಿಕೊಂಡರು.  ಅವರಿಗೆ ಹಿಂದೆ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಜಾನ್ ಟೇಲರ್ 1943 ರಲ್ಲಿ ನಿಧನಹೊಂದಿದಾಗ ದೇಶಮುಖರು ಅದರ ಗವರ್ನರ್ ಆಗಿ 1949ರ ವರೆಗೂ ಆ ಅಧಿಕಾರದಲ್ಲಿದ್ದರು.  ಆ ಬ್ಯಾಂಕಿನ ಪ್ರಥಮ ಭಾರತೀಯ ಗವರ್ನರ್ ಇವರೇ.  

ಆ ಸ್ಥಾನದಲ್ಲಿ ಇವರು ಮಾಡಿದ ಕೆಲಸ ಗಮನಾರ್ಹವಾದ್ದು.  ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ಕೇಂದ್ರೀಯ ಬ್ಯಾಂಕಿನ ಪಾತ್ರವೇನಿರಬೇಕೆಂಬುದನ್ನು ನಿರ್ಧರಿಸುವ ಹೊಣೆಗಾರಿಕೆ ಅವರದಾಯಿತು.  ಯುದ್ಧಾನಂತರ ಜಗತ್ತಿನ ಅಂತರರಾಷ್ಟ್ರೀಯ ಹಣವ್ಯವಸ್ಥೆಯನ್ನು ರೂಪಿಸಲು 1944 ರಲ್ಲಿ ಸಮಾವೇಶಗೊಂಡಿದ್ದ ವಿಶ್ವ ಹಣ ಸಮ್ಮೇಳನದಲ್ಲಿ ಅವರು ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದರು.  ಅಂತರರಾಷ್ಟ್ರೀಯ ಹಣನಿಧಿ ಹಾಗೂ ಅಂತರರಾಷ್ಟ್ರೀಯ ಪುನರ್ರಚನಾ ಮತ್ತು ಅಭಿವೃದ್ಧಿ ಬ್ಯಾಂಕಿನಲ್ಲಿ ಭಾರತದ ಪ್ರತಿನಿಧಿಯಾಗಿದ್ದರು.  ಅವರು ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದಾಗ ಭಾರತ ಸ್ವತಂತ್ರವಾಯಿತು.  ರಿಸರ್ವ್ ಬ್ಯಾಂಕಿನಲ್ಲಿ ಆರ್ಥಿಕ ಸಂಶೋಧನ ಇಲಾಖೆಯನ್ನು ಬಲಪಡಿಸಿದರು.  ಹಣ ವ್ಯವಹಾರ ಕುರಿತ ಸಂಶೋಧನೆ ಹಾಗೂ ಅಂಕಿ-ಅಂಶಗಳ ಸಂಗ್ರಹಣೆ ಪ್ರಕಟಣೆಗಳಿಗೆ ಬ್ಯಾಂಕು ವಿಶೇಷ ಗಮನ ನೀಡಲಾರಂಭಿಸಿತು.  ರಿಸರ್ವ್ ಬ್ಯಾಂಕ್ ಬುಲೆಟಿನ್ ಎಂಬ ಮಾಸಿಕದ ಪ್ರಕಟಣೆ ಆರಂಭವಾಯಿತು.  ಕೇಂದ್ರೀಯ ಬ್ಯಾಂಕು ವಾಣಿಜ್ಯ ಕ್ಷೇತ್ರದಲ್ಲೆ ಇರಬೇಕೆಂಬ ನಿಯಮವನ್ನು ಎತ್ತಿ ಹಿಡಿದು ರಿಸರ್ವ್ ಬ್ಯಾಂಕಿನ ಕೇಂದ್ರ ಕಚೇರಿಯನ್ನು ಮುಂಬೈ ನಗರದಲ್ಲಿ ಸ್ಥಾಪಿಸಿದರು.  ರಿಸರ್ವ್ ಬ್ಯಾಂಕಿನ ಕೇಂದ್ರ ಕಚೇರಿಯನ್ನು ಮುಂಬೈ ನಗರದಲ್ಲಿ ಸ್ಥಾಪಿಸಿದರು.  ರಿಸರ್ವ ಬ್ಯಾಂಕಿನ ರಾಷ್ಟ್ರೀಕರಣವಾದ್ದು (1948) ಅವರ ಅಧಿಕಾರದ ಅವಧಿಯಲ್ಲೇ, ಗವರ್ನರ್ ಹುದ್ದೆಯಿಂದ ನಿವೃತ್ತರಾದ ಮೇಲೆ ಇಂಗ್ಲೆಂಡಿನಲ್ಲಿ ವಿಶ್ರಾಂತಿ ಜೀವನ ನಡೆಸಬೇಕೆಂಬುದು ಅವರ ಉದ್ದೇಶವಾಗಿತ್ತು.  ಆದರೆ ಅವರ ಬ್ರಿಟಿಷ್ ಪತ್ನಿ ತೀರಿಕೊಂಡರು (1949). ಏಕೈಕ ಪುತ್ರಿಯಿಂದ ದೂರವಾಗಬೇಕಾಯಿತು.  ಇದರಿಂದ ದುಃಖತಪ್ತರಾದ ದೇಶಮುಖರು ಭಾರತದಲ್ಲೇ ನೆಲಸಲು ತೀರ್ಮಾನಿಸಿದರು. ಅಲ್ಲದೆ ಅವರ ಅನುಭವದ ಲಾಭವನ್ನು ಭಾರತ ಸರ್ಕಾರ ಉಪಯೋಗಿಸಿಕೊಂಡಿತು. ಯುರೋಪ್ ಅಮೇರಿಕಾಗಳಲ್ಲಿ ಅವರು ಭಾರತದ ಹಣಕಾಸಿನ ಪ್ರತಿನಿಧಿಯಾಗಿದ್ದರು (1949 - 50), 1950 ರಲ್ಲಿ ಅವರು ಅಂತರರಾಷ್ಟ್ರೀಯ ಹಣನಿಧಿ ಮತ್ತು ಅಂತರರಾಷ್ಟ್ರೀಯ ಪುನರ್ರಚನೆ ಹಾಗೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿದ್ದರು.  1949 ರಲ್ಲಿ ಭಾರತದ ಯೋಜನಾ ಆಯೋಗದ ಸದಸ್ಯರಾಗಿ ನೇಮಕವಾದ ಅವರು ಭಾರತದ ಮೊದಲನೆಯ ಪಂಚವಾರ್ಷಿಕ ಯೋಜನೆಯನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದರು.  1950 ರಲ್ಲಿ ಕೇಂದ್ರ ಹಣಕಾಸು ಮಂತ್ರಿಯಾದರು.  ಅವರ ಮಂತ್ರಿ ಪದವಿಯ ಕಾಲದಲ್ಲಿ ಭಾರತದ ತೆರಿಗೆ ಸುಧಾರಣೆಗಾಗಿ ಜಾನ್ ಮಥಾಯವರ ಅಧ್ಯಕ್ಷತೆಯಲ್ಲಿ ತೆರಿಗೆ ವಿಚಾರಣಾ ಸಮಿತಿ ನೇಮಕವಾಯಿತು.  ಅವರು ಡಾ|| ಕಾಲ್ಡಾರರನ್ನು ಆಹ್ವಾನಿಸಿ ಪ್ರತ್ಯಕ್ಷ  ತೆರಿಗೆ ಸುಧಾರಣೆಗೆ ಸಲಹೆಯನ್ನು ಪಡೆದರು.  ಯೋಜನೆಯ ರಚನೆಯ ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ಪಡೆಯಲು ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯನ್ನು ಸ್ಥಾಪಿಸಲು ಕಾರಣರಾದರು.  ಭಾರತದ ಇಂಪೀರಿಯಲ್ ಬ್ಯಾಂಕ್ ಮತ್ತು ಜೀವ ವಿಮಾ ಕಂಪನಿಗಳ ರಾಷ್ಟ್ರೀಕರಣವಾಯಿತು.  1962 ರಲ್ಲಿ ನಡೆದ ಪ್ರಥಮ ಮಹಾಚುನಾವಣೆಯಲ್ಲಿ ಅವರು ಸಂಸತ್ತಿನ ಸದಸ್ಯರಾಗಿ ಆಯ್ಕೆ ಹೊಂದಿದರು.  1955 ರಲ್ಲಿ ಅವರು ದುರ್ಗಾಬಾಯಿಯವರನ್ನು ವಿವಾಹವಾದರು ಭಾರತೀಯ ಕೈಗಾರಿಕಾ ಉದರಿ ಮತ್ತು ಬಂಡವಾಳ ಕಾರ್ಪೊರೇಷನ್ ಸ್ಥಾಪನೆ (1955) ಅವರ ಆಸಕ್ತಿಯ ಫಲ.

1956 ರಲ್ಲಿ ಮಂತ್ರಿಪದವಿಗೆ ರಾಜೀನಾಮೆ ನೀಡಿದ ಮೇಲೆ ವಿಶ್ವವಿದ್ಯಾಲಯ ಧನದಾನ ಆಯೋಗದ ಅಧ್ಯಕ್ಷರೂ (1956-61)  ರಾಷ್ಟ್ರೀಯ ಪುಸ್ತಕ ಟ್ರಸ್ಟ್‍ನ ಅಧ್ಯಕ್ಷರೂ (1957 - 60)  ಹೈದ್ರಾಬಾದಿನ ಆಡಳಿತ ಸಿಬ್ಬಂದಿ ಕಾಲೇಜು, ನವ ದೆಹಲಿಯ ಭಾರತ ಅಂತರರಾಷ್ಟ್ರೀಯ ಕೇಂದ್ರ, ಆರ್ಥಿಕ ಬೆಳವಣಿಗೆಯ ಭಾರತೀಯ ಸಂಸ್ಥೆ, ಸಾಮಾಜಿಕ ಅಭಿವೃದ್ಧಿ ಮಂಡಲಿ, ಭಾರತದ ಜನಸಂಖ್ಯಾ ಮಂಡಲಿ ಮುಂತಾದ ಸಂಸ್ಥೆಗಳ ಅಧ್ಯಕ್ಷರೂ ವಿಶ್ವ ಸಂಸ್ಥೆಯ ತರಬೇತು ಮತ್ತು ಸಂಶೋಧನ ಸಂಸ್ಥೆಯ ಟ್ರಸ್ಟಿಗಳ ಮಂಡಲಿಯ ಉಪಾಧ್ಯಕ್ಷರೂ ಆಗಿ ಅವರು ಸೇವೆ ಸಲ್ಲಿಸಿದ್ದಾರೆ.  1966 -70 ರಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು.  1967 - 68 ರಲ್ಲಿ ಕೇಂದ್ರ ಸಂಸ್ಕøತ  ಮಂಡಲಿಯ ಅಧ್ಯಕ್ಷರಾಗಿದ್ದರು.  1952 ರಲ್ಲಿ ಅವರು ಕೆಂಬ್ರಿಜಿನ ಜೇಸಸ್ ಕಾಲೇಜಿನ ಫೆಲೊ ಆದರು.

ದೇಶಮುಖರು ಸರ್ಕಾರಕ್ಕೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಫಿಲಿಪೀನ್ಸಿನ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ 1959 ರಲ್ಲಿ ದೊರೆಯಿತು. ಶಿಕ್ಷಣ, ಸಂಸ್ಕøತಿ, ಹಣ, ಬ್ಯಾಂಕಿಂಗ್ ಮುಂತಾದ ವಿಚಾರಗಳನ್ನು ಕುರಿತು ಅವರು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ.  ಆರ್ಥಿಕಾಭಿವೃದ್ಧಿ, ಆಧುನಿಕ ಬ್ಯಾಂಕಿಂಗ್ ಮುಂತಾದ ವಿಷಯಗಳನ್ನು ಕುರಿತ ಪುಸ್ತಕಗಳನ್ನು ಬರೆದಿದ್ದಾರೆ.
(ಎನ್.ಜಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ